ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಚಿತ್ಪಾವನ ಕುಲಗುರು ಪರಶುರಾಮನ ದೇವಾಲಯವು, ಎಂದು ಸ್ಥಾಪಿತವಾಯಿತೆಂದು ಖಚಿತವಾಗಿಲ್ಲವಾದರೂ, ಸುಮಾರು 250 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದಿರಬಹುದೆಂದು ಅಂದಾಜಿಸಬಹುದು. 18ನೇ ಶತಮಾನದ ಪೂರ್ವಾರ್ಧದಲ್ಲಿ ಮಾಳ ಗ್ರಾಮದ ಚಿತ್ಪಾವನರು ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಜಕರಾಗಿದ್ದರು. 1775ರಲ್ಲಿ ದುರ್ಗ ಶ್ರೀಹರಿಹರೇಶ್ವರ ದೇವಳವು ಸ್ಥಾಪಿತವಾದ ಮೇಲೆ ಇಲ್ಲಿಯ ಭಜಕರಾದರು. ಕೆಲವರ್ಷಗಳ ನಂತರ ಯಾವುದೋ ಒಂದು ಕಾರಣದಿಂದ ತಮ್ಮ ಸ್ವಾಭಿಮಾನಕ್ಕೆ ಕುಂದು ಬಂದು, ಮಾಳದಲ್ಲಿಯೇ ಒಂದು ದೇಗುಲ ಕಟ್ಟುವ ಸಂಕಲ್ಪ ಮಾಡಿದರೆಂದು ತಿಳಿದು ಬರುತ್ತದೆ. 1790ರಲ್ಲಿ ಶೃಂಗೇರಿ ಶ್ರೀ ಜಗದ್ಗುರುಗಳು ಮಾಳ ಶ್ರೀ ಪರಶುರಾಮ ದೇವಸ್ಥಾನಕ್ಕೆ ಬೇಟಿ ನೀಡಿದ ಉಲ್ಲೇಖವು ಶೃಂಗೇರಿ ಮಠದ ಕಡತದಲ್ಲಿ ದಾಖಲಿಸಲ್ಪಟ್ಟಿರುವುದರಿಂದ ಈ ದೇವಸ್ಥಾನವು 1790ಕ್ಕಿಂತ ಮೊದಲೇ ಸ್ಥಾಪಿತವಾಗಿರಬಹುದೆಂದು ಹೇಳಬಹುದು.
ಪ್ರಾರಂಭದಲ್ಲಿ ಮಾಳದ ಚಿತ್ಪಾವನರು ಹೇರಂಜೆ ಪಾಳ್ಯದ (ಈಗ ಶ್ರೀ ಪುರಾಣಿಕ ಮರಾಠೆಯವರಿಗೆ ಸೇರಿದ ಸ್ಥಳ) ಒಂದು ನಿವೇಶನವನ್ನು ಆರಿಸಿ, ಅಲ್ಲಿ ಗರ್ಭಗೃಹ ಮತ್ತು ಪೌಳಿಗಳ ಅಡಿಪಾಯವನ್ನು ಹಾಕಿದರು. ಈ ಸಂದರ್ಭದಲ್ಲಿ ಅತಿಯಾದ ನಾಗಬಾಧೆ ಕಂಡುಬಂದುದರಿಂದ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿ ಬೇರೆ ಸ್ಥಳದ ಹುಡುಕಾಟ ಪ್ರಾರಂಭವಾಯಿತು. ಈಗಲೂ ಸದ್ರಿ ಸ್ಥಳದಲ್ಲಿ ಈ ಕಾಮಗಾರಿಗಳ ಕುರುಹುಗಳನ್ನು ಕಾಣಬಹುದು.
ಹೇರಂಜೆ ಪರಮೇಶ್ವರ ಹೆಬ್ಬಾರರ ಸಂಬಂಧಿ, ಶ್ರೀ ವೆಂಕಯ್ಯ ಹೆಬ್ಬಾರರ ವಂಶಜರಾದ ಓರ್ಲ ಸಾವಿತ್ರಿ ಅಮ್ಮನವರು ಈಗ ಇರುವ ದೇವಳದ ನಿವೇಶನವನ್ನು ಉಚಿತವಾಗಿ ನೀಡಿದ ದಾಖಲೆಗಳಿವೆ. ಬ್ರಿಟಿಷ್ ರಾಜ ಖಾಲ್ಸಾ ಕಾಯ್ದೆಯನ್ವಯ ಮಕ್ಕಳಿಲ್ಲದವರ ಸಮಸ್ತ ಆಸ್ತಿಯು ಸರಕಾರಕ್ಕೆ ಸೇರಬೇಕಿತ್ತು. ಆದರೆ ಧಾರ್ಮಿಕ ಸಂಸ್ಥೆಗಳಿಗೆ ದಾನಶಾಸನ ಮಾಡಿಕೊಡಲು ಕಾನೂನಿನ ಸಡಿಲಿಕೆ ಇತ್ತು. ಪುತ್ರ ಸಂತತಿ ಇಲ್ಲದ ಓರ್ಲ ಸಾವಿತ್ರಿ ಅಮ್ಮನವರು ಈಗಿರುವ ದೇವಳದ ಸ್ಥಳವನ್ನು ದೇವಾಲಯ ಕಟ್ಟಲು ದಾನವಾಗಿ ಕೊಟ್ಟರು. ಅಂತೆಯೇ ಬರ್ವೆ ಮತ್ತು ಕೊಚ್ಚಿ ತೋಟಗಳಿಂದ ಬರುವ ಗೇಣಿಯನ್ನು ಶ್ರೀ ದೇವರ ಒಂದು ಹೊತ್ತಿನ ನೈವೇದ್ಯಕ್ಕೂ, ನಿತ್ಯ ನಂದಾದೀಪದ ಖರ್ಚಿಗೂ ಬಿಟ್ಟುಕೊಟ್ಟರೆಂಬ ದಾಖಲೆಗಳಿವೆ.
ಎಡಪಾಡಿಯ ಎಲ್ಲ ಬಾಗ್ಯಾತುಗಳಿಗೆ ಮೂಲ ನಂಬ್ರ 13ನೇ "ವೆಂಕಯ್ಯ ಹೆಬ್ಬಾರರ ವರ್ಗ" ಎಂದು ರೆವಿನ್ಯೂ ಇಲಾಖೆಯಲ್ಲಿ ಬರೆದಿರುವುದು ಮೇಲಿನ ಹೇಳಿಕೆಗೆ ಆಧಾರವಾಗಿದೆ.
ಹೇರಂಜೆ ಹೆಬ್ಬಾರರು ಭಾಗವತ ಸಂಪ್ರದಾಯದವರಾಗಿದ್ದರೂ ದೇವಸ್ಥಾನದಲ್ಲಿ ಪೌರೋಹಿತ್ಯ ನಮ್ಮವರದೇ ಇತ್ತು. ದೇವಳದಲ್ಲಿ ನಡೆಯುವ ಚೌತಿ, ನವರಾತ್ರಿ ಪೂಜೆ, ಉಪಾಕರ್ಮಗಳಿಗೆ ನಮ್ಮ ಜತೆ ಅವರೂ ಬರುತ್ತಿದ್ದರು. ಮೊದಲು ಶ್ರೀ ದೇವರ ಅವಭೃತವು ಹಲ್ಲಂತಡ್ಕದ ಬಳಿಯ ದೇವರಗುಂಡಿಯಲ್ಲಿಯೇ ನಡೆಯುತ್ತಿತ್ತಂತೆ. ನಂತರ 1873ರಲ್ಲಿ ನೂತನ ವಿಗ್ರಹ ಪ್ರತಿಷ್ಠಾಪಿಸಲ್ಪಟ್ಟ ಬಳಿಕ ಈ ಅವಭೃತವು ಮಲ್ಲಾರು ಬಳಿಯ ದೇವರ ಗುಂಡಿಗೆ ವರ್ಗಾವಣೆಗೊಂಡಿತು. ಒಮ್ಮೆ ದೇವರ ಅವಭೃತದ ಸಂದರ್ಭದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸವಾರಿಕಟ್ಟೆಯ ಬಳಿ ನಡೆಯುವ ಕಟ್ಟೆ ಪೂಜೆಗಳಿಗೆ ತೊಂದರೆ ಉಂಟಾಗಿ ಅವುಗಳನ್ನೆಲ್ಲ ಅರ್ಚಕರ ನಿವಾಸದ ಜಗುಲಿಯ ಮೇಲೆ ನಡೆಸಬೇಕಾಯಿತು. ಇದರ ನೆನಪಿಗಾಗಿ ಈಗಲೂ ಪಾಲಕೀ ಉತ್ಸವದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಶ್ರೀ ದೇವರಿಗೆ ಆರತಿ ಎತ್ತುವ ಸಂಪ್ರದಾಯವಿದೆ.
ದೇವಳದ ಸ್ಥಾಪನೆಯಾದ ಕಾಲದಲ್ಲಿ ದೇವಸ್ಥಾನದ ಆಡಳಿತವನ್ನು ಯಾರು ವಹಿಸಿದ್ದರು? ಹಾಗೂ ಸ್ಥಿರ, ಚರ ಸೊತ್ತುಗಳು ಎಷ್ಟಿದ್ದವು? ಎಂಬುವುದಕ್ಕೆ ದಾಖಲೆಗಳಿಲ್ಲವಾದರೂ , ದೇವಳದ ಹಳೆ ದಾಖಲೆಯಲ್ಲಿ ಸಿಕ್ಕಿದ 1831ರ ಮೂಲಗೇಣಿ ಚೀಟಿಯಲ್ಲಿ ಈ ಕೆಳಗಿನವರು ಆಡಳಿತಗಾರರಾಗಿದ್ದರೆಂದು ತಿಳಿದು ಬರುತ್ತದೆ.
1870ರ ಸುಮಾರಿಗೆ ದೇವಳವು ಅಗ್ನಿ ಪ್ರಕೋಪಕ್ಕೆ ಗುರಿಯಾಗಿ, ಹಳೆಯ ಸೋಗೆ ಮಾಡು ನಾಶವಾಗಿ ವಿಗ್ರಹ ಭಿನ್ನವಾಗಿತ್ತು. ಈ ವಿಗ್ರಹವನ್ನು ಜಲಾಧಿವಾಸ ಮಾಡಲಾಯಿತಾದರೂ ಗುಳಿಮನೆ, ವೈದಿಕ ಕೃಷ್ಣಭಟ್ ಡೋಂಗ್ರೆ ಎಂಬವರು ಅದನ್ನು ಗುಳಿಮನೆಯಲ್ಲಿ ಮನೆದೇವರಾಗಿ ಪ್ರತಿಷ್ಠಾಪಿಸಿದರು. ಈಗಲೂ ಈ ಮೂರ್ತಿಯನ್ನು ಡೋಂಗ್ರೆ ಮನೆತನದವರು ಪೂಜಿಸುತ್ತಿದ್ದಾರೆ.
1873ರಲ್ಲಿ ನವೀನ ವಿಗ್ರಹವನ್ನು ಸ್ಥಾಪಿಸಿ 800ರೂ.ಗಳಿಂದ ಹಂಚಿನ ಪೌಳಿ ಮಾಡನ್ನು ಮಾಡಲಾಯಿತು. ಹಂಚು ಹಾಗೂ ಇತರ ಸಾಮಾಗ್ರಿಗಳನ್ನು ಚೌಕಿಯಿಂದ ತಲೆಹೊರೆಯಲ್ಲಿ ತರಲಾಗಿತ್ತು.
1885ರಲ್ಲಿ 12 ಜನ ಪ್ರಮುಖರು ಸೇರಿ ದೇವಳದ ಆಡಳಿತವನ್ನು ನಡೆಸುವ ಬಗ್ಗೆ ಕರಾರು ಮಾಡಿದ್ದು ಒಂದು ಪ್ರಮುಖ ದಾಖಲೆ. ಅದರಂತೆ ಈ ಕೆಳಗಿನವರು 1905ನೇ ಇಸವಿವರೆಗೆ ಇಬ್ಬಿಬ್ಬರಂತೆ ಬದಲಾಯಿಸಿಕೊಳ್ಳುತ್ತ 20 ವರ್ಷಆಡಳಿತ ನಡೆಸಿದ್ದರು.
ಇದೇ ಅವಧಿಯಲ್ಲಿ ಗುರಿಕಾರ ಮಹಾದೇವ ಭಟ್ಟರ ಮುತುವರ್ಜಿಯಿಂದ ಎದುರಿನ ಚಾವಡಿಯನ್ನು ಕಟ್ಟಲಾಯಿತು.
1905ನೇ ಇಸವಿಯಲ್ಲಿ 23 ಜನ ಪ್ರಮುಖರ ಸಮಕ್ಷಮದಲ್ಲಿ ರಿಜಿಸ್ಟ್ರಿ ಆದ ಆಡಳಿತ ಕರಾರು ಪ್ರಕಾರ
ಇವರು ದೇವಸ್ಥಾನದ ದಕ್ಷಿಣ, ಪಶ್ಚಿಮ, ಉತ್ತರ ಪೌಳಿಗಳನ್ನು ಹಂಚಿನ ಮಾಡಿನಿಂದ ನವೀಕರಿಸಿದರು.
ದೇವಳದ ಆಡಳಿತ ಸಂಬಂಧೀ ಒಂದು ಖಟ್ಲೆಯ ಕುರಿತು 1904ನೇ ಇಸವಿಯಲ್ಲಿ ಮದ್ರಾಸ್ ಎಂಡೋಮೆಂಟ್ ಕೋರ್ಟಿನ ತೀರ್ಪಿನಂತೆ ಈ ದೇವಾಲಯವು "ಚಿತ್ಪಾವನ ಸಮಾಜ ದೇವಾಲಯ"ವೆಂದು ದೃಢೀಕರಣಗೊಂಡಿರುವುದು ಉಲ್ಲೇಖನೀಯ.
ಹೀಗೆ ಈ ಪರಶುರಾಮ ದೇವಾಲಯವು ಚಿತ್ಪಾವನರ ಸಾಮಾಜಿಕ, ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದೆ, ಹಾಗೂ ಚಿತ್ಪಾವನರ ಅಸ್ತಿತ್ವವನ್ನು ಭವಿಷ್ಯತ್ತಿನಲ್ಲೂ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.